UKSL Got Talent – 2022 (Season 6)

UKSL Got Talent – 2022 (Season 6)

Uday Vani News Paper

ಕಾರ್ಯಕ್ರಮದ ವರದಿ

ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಬೆಂಗಳೂರಿನ ಎಸ ಜೆ ಆರ್ ಹೈಸ್ಕೂಲಿನ ಷಡಕ್ಷರಯ್ಯ ಸಭಾಂಗಣದಲ್ಲಿ ಜುಲೈ 24 ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಬೆಂಗಳೂರು ಪೊಲೀಸ್ ಕಮಿಷನರ್ ಶ್ರೀ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಆಗಮಿಸಿದ್ದರು. ಅವರು ತಮ್ಮ ಹಿತವಚನದಲ್ಲಿ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆಯುವದರ ಜೊತೆಗೆ ಉತ್ತಮ ನಾಗರೀಕರಾಗಿಯೂ ಬೆಳೆಯಬೇಕೆಂದು ತಿಳಿಸಿದರು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಟ್ರಸ್ಟಿನ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ‘ಪ್ರಾಂತೀಯ ಕೂಟ ವಿಶ್ವದತ್ತ ನೋಟ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಟ್ರಸ್ಟಿಗೆ ಶುಭ ಹಾರೈಸಿದರು.

ಟ್ರಸ್ಟಿನ ಸದಸ್ಯರ ಮಕ್ಕಳಿಂದ ಚಿತ್ರಕಲೆ, ಭರತನಾಟ್ಯ, ನೃತ್ಯ, ಭಾಷಣ, ತಬಲಾ ವಾದನ, ಕೊಳಲುವಾದನ, ಸಂವಾದ, ಹಾಡು ಹೇಳುವದು ಮತ್ತು ಹಾಡುಗಳಿಗೆ ತಕ್ಕಂತೆ ನರ್ತನ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು.

ಪ್ರಾಸ್ತಾವಿಕ ಭಾಷಣ ಮಾಡಿದ ಟ್ರಸ್ಟಿನ ಖಜಾಂಚಿ ಶ್ರೀ ಪ್ರಕಾಶ ರಾಜಗೋಳಿ ಅವರು ಟ್ರಸ್ಟು ನಡೆದು ಬಂದ ದಾರಿ, ಇದುವರೆಗೆ ನೆರೆ ಹಾವಳಿ ಪೀಡಿತರು, ಕೋವಿಡ್ ಪೀಡಿತರು, ವೃದ್ಧಾಶ್ರಮ, ಅಂಧರ ಶಾಲೆ ಮುಂತಾದವರಿಗೆ ಸುಮಾರು ೩೦ ಲಕ್ಷದವರೆಗೆ ಅಗತ್ಯ ವಸ್ತು ವಿತರಿಸಿದ ಬಗ್ಗೆ ವಿವರಿಸಿದರು. ಟ್ರಸ್ಟಿನ ಸದಸ್ಯರೇ ಸ್ವತಃ ಎಲ್ಲ ಕಾರ್ಯಗಳಲ್ಲಿ ಕೈಜೋಡಿಸಿ ದಾನಿಗಳು ನೀಡಿದ ಹಣ ಸತ್ಪಾತ್ರರಿಗೆ ತಲುಪಿಸುತ್ತಾರೆ ಎಂದು ತಿಳಿಸಿದರು. ತನು ಮನ ಧನದಿಂದ ಸಹಾಯ ಸಹಕಾರ ನೀಡುತ್ತಿರುವ ಸದಸ್ಯರ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದರು.

ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಲು ಶ್ರಮದ ಜೊತೆಗೆ ತಯಾರಿ ಹೇಗಿರಬೇಕು ಎನ್ನುವದರ ಬಗ್ಗೆ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಅರುಣ ಯಾದವಾಡ ಅವರು ತಿಳಿಸಿದರು.

ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಗಂಗಾಧರ ವಾಲಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಾಲಿನ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರಾಂಕ್ ಪಡೆದ ಕು. ಸಹನಾ ಮಡಿವಾಳರ ಮತ್ತು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ರಾಂಕ್ ಪಡೆದ ಕು.ಸ್ಪೂರ್ತಿ ನಾಗನೂರು ಇವರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿನಿ ಸಹನಾ ಇವಳಿಗೆ ಟ್ರಸ್ಟಿನ ಸದಸ್ಯರಾದ ಶ್ರೀ ಅನಿಲಕುಮಾರ್ ಅಂಗಡಿ ಮತ್ತು ಮೀನಾಕ್ಷಿ ಅಂಗಡಿ ಅವರು ಐವತ್ತು ಸಾವಿರ ರೂಪಾಯಿಗಳ ಹಣಕಾಸಿನ ನೆರವು ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು ಸಹನಾ ಮತ್ತು ಕು ಸ್ಪೂರ್ತಿ ತಾವು ಅಭಾಸಿಸಿದ ರೀತಿ, ಗುರು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದಗಳ ಬಗ್ಗೆ ತಿಳಿಸಿ ತಮ್ಮನ್ನು ಸನ್ಮಾನಿಸಿದ್ದಕ್ಕೆ ಟ್ರಸ್ಟಿಗೆ ಗೌರವ ವಂದನೆ ತಿಳಿಸಿದರು.

2020,21,22 ಸಾಲಿನ 10ನೇ 12ನೇ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ  ಸದಸ್ಯರ ಮಕ್ಕಳಿಗೆ ಸ್ಮರಣಿಕೆ ಮತ್ತು ಸರ್ಟಿಫಿಕೇಟುಗಳನ್ನು ಮುಖ್ಯ ಅತಿಥಿಗಳು ನೀಡಿದರು.

ಟ್ರಸ್ಟಿನ ವನಿತಾ ಲೋಕದ ಸದಸ್ಯೆಯರು ಮತ್ತು ಪ್ರಾಯೋಜಕರಾದ ಶ್ರೀಮತಿ ಚೈತ್ರಾ ಹೂಗಾರ, ಶ್ರೀಮತಿ ಮಂಜುಳಾ ಕೊಳವಿ, ಶ್ರೀಮತಿ ಈಷ್ಟಾ ಜವಳಗಿಕರ್ ಮುಂತಾದವರನ್ನು ಅತಿಥಿಗಳು ಸನ್ಮಾನಿಸಿದರು.

ಕು ದೀಕ್ಷಾ ವಾಲಿ, ವೃಷಭ್ ಸುಕಾಲಿ, ದರ್ಶನ ಗುಗ್ಗರಿ, ಅಮೇಯ ಪಾಟೀಲ, ಸಾಕ್ಷಿ ಶಾಮಭಟ್ಟನವರ, ಶ್ರೀಮತಿ ಅಶ್ವಿನಿ ವಾಲಿ, ಸೌಖ್ಯ ಮೆಟಗುಡ್ಡಮಠ, ಶ್ರೀ ಗಿರೀಶ ಮೆಟಗುಡ್ಡಮಠ, ಶ್ರೀಮತಿ ಶೀಲಾ ಹೆಬ್ಬಾಳಕರ ಮುಂತಾದವರು ಕಾರ್ಯಕ್ರಮ ನಡೆಸಿಕೊಟ್ಟರು.

ಟ್ರಸ್ಟಿಗಳಾದ ಶ್ರೀಮತಿ ವೀಣಾ, ಶ್ರೀ ಪ್ರಭು ಸವಣೂರು, ಶ್ರೀ ದೀಪಕ ಆಲೂರ, ಶ್ರೀ ಕುಮಾರ ಹಂದೂರ್ ಮತ್ತು ಶ್ರೀಮತಿ ಸುಜಾತ ಮುಂಗರವಾಡಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ವನಿತಾ ಲೋಕದ ಸದಸ್ಯೆಯರಿಂದ ವೃಂದ ಗಾಯನವಿತ್ತು.

ಭಾಗವಹಿಸಿದವರಿಗೆ ಬೆಳಗ್ಗೆ ಚಹಾ ಕಾಫಿ, ಮಧ್ಯಾಹ್ನದ ರುಚಿಕಟ್ಟಾದ ಊಟ ಮತ್ತು ಸಾಯಂಕಾಲ ಚುರುಮರು ಭಜಿ ಜೊತೆಗೆ ಚಹಾದ ವ್ಯವಸ್ಥೆ ಮಾಡಲಾಗಿತ್ತು.

ವನಿತಾಲೋಕದ ಸದಸ್ಯರಾದ ಶ್ರೀಮತಿ ಭಾರತಿ ಮೆಟಗುಡ್ಡಮಠ ಅವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 

Authored by Prakash Rajagoli (Trustee and Treasurer)

Leave a Reply

Your email address will not be published. Required fields are marked *

Message *
Name*
Email *