ಉತ್ತರ ಕರ್ನಾಟಕ ಸ್ನೇಹಲೋಕ ವಾರ್ಷಿಕೋತ್ಸವದ ವರದಿ

ಉತ್ತರ ಕರ್ನಾಟಕ ಸ್ನೇಹಲೋಕ ವಾರ್ಷಿಕೋತ್ಸವದ ವರದಿ

8/1/2023

ಉತ್ತರ ಕರ್ನಾಟಕ ಸ್ನೇಹಲೋಕದ ವಾರ್ಷಿಕೋತ್ಸವ ೨ ವರ್ಷಗಳ ಬಿಡುವಿನ ನಂತರ ಮತ್ತೆ ಆಚರಿಸಲಾಗುತ್ತಿದ್ದುದರಿಂದ ಎಲ್ಲರಿಗೂ ಮತ್ತೆ ಮರಳಿ ನಮ್ಮ UKSL ಮಿತ್ರರನ್ನು/ಬಂಧುಗಳನ್ನು ಭೇಟಿ ಆಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ ಅಥವಾ ನೋಡುವುದಾಗಲಿ ಅಂತ ಹುಮ್ಮಸ್ಸಿತ್ತು.

 

ಆದರೆ, ಕಾರ್ಯಕ್ರಮದ ದಿನದ ತಯ್ಯಾರಿಗಳು ಕಾರ್ಯಕಾರಿ ಮಂಡಳಿಯವರಿಂದ ಒಂದೆರಡು ತಿಂಗಳು ಮುಂಚಿತವಾಗಿಯೇ ಶುರು ಆಗಿದ್ದವು. ಅದು ಪ್ರಾಯೋಜಕರನ್ನು ಹುಡುಕುವುದಾಗಲಿ, ಕಾರ್ಯಕ್ರಮದ ಸ್ಥಳವನ್ನು ನಿಗದಿಪಡಿಸುವುದಾಗಲಿ, ಕಾರ್ಯಕ್ರಮಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸುವುದಾಗಿರಲಿ, ಮುಖ್ಯವಾಗಿ ಡೊಳ್ಳು ಕುಣಿತದ ತಂಡದವರನ್ನು, Standup Comedian ಮತ್ತು ಮುಖ್ಯ ಅತಿಥಿಗಳನ್ನು ಆಮಂತ್ರಿಸುವುದಾಗಲಿ, ಇತ್ಯಾದಿಗಳು…

 

ಕಾರ್ಯಕಾರಿ ಮಂಡಳಿಯ ಸದಸ್ಯರು ದಿನವೂ ರಾತ್ರಿ ೧೧, ೧೧:೩೦ ರ ವರೆಗೂ ಕಾರ್ಯಕ್ರಮದ  ರೂಪುರೇಷೆಗಳ ಹಾಗು ಹಂಚಿಕೊಂಡ ಕೆಲಸಗಳ ಪ್ರಗತಿಯ ಬಗ್ಗೆ ಚರ್ಚೆಗಳಾಗುತ್ತಿದ್ದವು. ದಿನನಿತ್ಯ ಈ ಚರ್ಚೆಗಳು ಅಂತರ್ಜಾಲದ ಮುಖಾಂತರ ನಡೆದರೆ, ವಾರಾಂತ್ಯಗಳಲ್ಲಿ ಇವು ಸದಸ್ಯರ ಸಮಕ್ಷಮ ನಡೆಯುತ್ತಿದ್ದವು. ಈ ಚರ್ಚೆಗಳನ್ನು ನಡೆಸಲು ಅನುವು ಮಾಡಿಕೊಟ್ಟು ತಮ್ಮ ಮನೆಗಳಿಗೆ ಆಹ್ವಾನವಿತ್ತು ಸಹೃದಯದಿಂದ “ಫಳಾರ/ಚಹಾ” ದ ವ್ಯವಸ್ಥೆ ಮಾಡಿದ ಮೆಟಗುಡ್ಡಮಠರವರ ಕುಟುಂಬ, ಹುದ್ದಾರ ಅವರ ಕುಟುಂಬ ಮತ್ತು ಗುರು/ಛಾಯಾ ಭಗವತಿ ಅವರ ಕುಟುಂಬಗಳಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಸಾಲದು.

 

ಅದೇ ರೀತಿ, ನಮ್ಮ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಸಹಾಯ ಮಾಡಿದವರು ನಮ್ಮವರೇ ಆದ ತಿಮ್ಮನ ಗೌಡರ್ ಎಜುಕೇಶನ್ ಅಕ್ಯಾಡೆಮಿಯ ಮುಖ್ಯಸ್ಥರಾದ ಶ್ರೀಯುತ ಶ್ರೀನಿವಾಸ್ ತಿಮ್ಮನ ಗೌಡರ್ ಅವರು. ಡೊಳ್ಳು ಕುಣಿತದ ತಂಡವನ್ನು ಬರಮಾಡಲು ಸಹಕರಿಸಿದ ಪದ್ಮಜಾ ಅವರು, ಆಟೋಟಗಳಲ್ಲಿ ಮತ್ತು ಮೋಜಿನಲ್ಲಿ ನಮ್ಮನ್ನು ವ್ಯಸ್ತವಾಗಿರಿಸಿದ ಕುಮಾರಿ ಗೌರಿಯವರನ್ನು ಕರೆತರಲು ಸಹಕರಿಸಿದವರು ಗಿರೀಶ್ ಕುಲಕರ್ಣಿಯವರು. ಶ್ರೀ ರಾಘವೇಂದ್ರ ಆಚಾರ್ಯ ಅವರನ್ನು ಕರೆತರಲು ಸಮನ್ವಯಿಸಿದವರು ಮಹಾಂತಯ್ಯ ಅವರು ಮತ್ತು ನಮ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಹಾಗೂ ಅದಮ್ಯ ಚೇತನ  ಶ್ರೀಯುತ ಡಾ. ಸುಬ್ರಮಣ್ಯಂ ಅವರನ್ನು ಆಹ್ವಾನಿಸಲು ಸಮನ್ವಯಿಸಿದವರು ಶಿವಯೋಗಿ ತುರುಮುರಿಯವರು. ಎಲ್ಲ ಪ್ರಗತಿಯನ್ನು ತುಂಬಾ ಅಚ್ಚುಕಟ್ಟಾಗಿ ಮತ್ತು ಹತ್ತಿರದಿಂದ ನಿರೀಕ್ಷಿಸುತ್ತಿದ್ದವರು ನಮ್ಮ ಯುಕೆಎಸ್ಎಲ್ ಟ್ರಸ್ಟಿಗಳು.

 

ನೋಡು ನೋಡುತ್ತಿದ್ದ ಹಾಗೆ ಕಾರ್ಯಕ್ರಮದ ದಿನ ೮ನೇ ಜನವರಿ ೨೦೨೩ ರವಿವಾರ ಬಂದೇ ಬಿಟ್ಟಿತು ಕಾರ್ಯಕ್ರಮ ಹಮ್ಮಿಕೊಂಡಿದ್ದು ಮೈಸೂರು ರಸ್ತೆಯ ಕೊಂಬಳಗೋಡು ಹತ್ತಿರವಿರುವ ಗಾರ್ಡನ್ ಏಷ್ಯಾ ರಿಸಾರ್ಟ್ ನಲ್ಲಿ.

 

ಈ ವಾರ್ಷಿಕೋತ್ಸವಕ್ಕೆ ವಿಶೇಷವಾಗಿ ರೂಪುಗೊಂಡಿದ್ದ ಕಾರ್ಯಕಾರಿ ಮಂಡಳಿ ಸದಸ್ಯರು  ಕಾರ್ಯಕ್ರಮಕ್ಕೆ ಬೇಕಾದ ವಸ್ತುಗಳು, ಸ್ಥಳದ ಮತ್ತು ಧ್ವನಿ ವ್ಯವಸ್ಥೆಯ ಪರಿವೀಕ್ಷಣೆ ಇತ್ಯಾದಿಗಳನ್ನು ಮುಂಚಿತವಾಗಿಯೇ ಸಂಪೂರ್ಣಗೊಳಿಸಿದ್ದರು.

 

ಬೆಳಿಗ್ಗೆ ಎಂಟು ಘಂಟೆಯಿಂದಲೇ ಸ್ಥಳದಲ್ಲಿ ಹೆಸರು ನೋಂದಾವಣಿ ಶುರುವಾಗಿದ್ದು, ಮುಂಚಿತವಾಗಿ ತಮ್ಮ ಹೆಸರುಗಳನ್ನು ಯಾರಿಗೆ ನೊಂದಾಯಿಸಲು ಸಾಧ್ಯವಾಗಲಿಲ್ಲವೋ ಅವರೆಲ್ಲ ಸ್ಥಳದಲ್ಲಿ ತಮ್ಮ ತಮ್ಮ ಹೆಸರುಗಳನ್ನು ನೊಂದಾಯಿಸಿದರು. ಎಲ್ಲ UKSL ಬಂಧು ಮಿತ್ರರನ್ನು ಸ್ವಾಗತಿಸಿದವರು ಸ್ಪರ್ಶ ಟ್ರಸ್ಟ್ ನ ಡೊಳ್ಳು ಕುಣಿತದ ತಂಡದ ಬಾಲಕಿಯರು. ಅವರು ತಮ್ಮ ವಿಶಿಷ್ಟ ಡೊಳ್ಳು ಕುಣಿತದ ಪ್ರದರ್ಶನದಿಂದ ನೆರೆದ ಎಲ್ಲರನ್ನು ರಂಜಿಸಿದರು.

 

ಬೆಳಗಿನ ಕಾರ್ಯಕ್ರಮಗಳು ಹೊರಾಂಗಣದವಾಗಿದ್ದರೆ, ಮಧ್ಯಾಹ್ನದ ಕಾರ್ಯಕ್ರಮಗಳು ಒಳಾಂಗಣದವಾಗಿದ್ದವು. ಬಂದಂತಹ ಸದಸ್ಯರನ್ನು ಪ್ರಕಾಶ್ ರಾಜಗೋಳಿಯವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಪರಿಚಯಿಸಿದರು. ನಮ್ಮ UKSL ಬಳಗದ ಮಂದಿಯ ವಿಶಿಷ್ಟ ಉಡುಗೆತೊಡುಗೆಗಳನ್ನು ನೋಡುವುದೇ ಚಂದ.  ಅದು ಶಾಮ್ ಭಟ್ ನವರ ಕುಟುಂಬವಾಗಿವಾರಬಹುದು, ರಾಜಗೋಳಿ ಅವರ ಕುಟುಂಬವಾಗಿರಬಹುದು, ವಾಲಿ ಕುಟುಂಬವಾಗಿರಬಹುದು, ನಮ್ಮ ಹಿರಿಯರು ಕೂಡ ಅಷ್ಟೇ ಹುಮ್ಮಸ್ಸಿನಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಮ್ಮ ಚಿಣ್ಣರರಂತೂ ಎಲ್ಲಾ ಆಟಗಳಲ್ಲಿ ಭಾಗವಹಿಸಿ ಸಂತೋಷ ಪಟ್ಟರು. ಈ ವಾರ್ಷಿಕೋತ್ಸವಕ್ಕೆ ಅಬಾಲ ವೃದ್ಧರಾಗಿ ಸುಮಾರು 200 ಜನ ಆಗಮಿಸಿದ್ದರು.

 

ಗೌರಿಯವರು ಮಕ್ಕಳಿಗೆ, ದಂಪತಿಗಳಿಗೆ ಮತ್ತು ಹಿರಿಯರಿಗಾಗಿ ಬೇರೆ ಬೇರೆ ಆಟಗಳನ್ನು ಆಡಿಸಿದರು. ಆಟಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ಕೂಡ ವಿತರಿಸಲಾಯಿತು . ದಂಪತಿಗಳಿಗೆ ವಿಶೇಷವಾಗಿ “ಒಡಪು ಕಟ್ಟಿ ತಮ್ಮ ಗಂಡನ ಅಥವಾ ಹೆಂಡತಿಯ ಹೆಸರು ಹೇಳುವುದು” ಕಾರ್ಯಕ್ರಮ ಏರ್ಪಡಿಸಿದ್ದು ಎಲ್ಲರಿಗೂ ಮನರಂಜಿಸಿತು, ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ ಈ ಕಾರ್ಯಕ್ರಮ ನಂತರ ಒಬ್ಬರನ್ನು ನೋಡಿ ಇನ್ನೊಬ್ಬರು ಹೆಸರು ಹೇಳಲು ಶುರು ಆಗುತ್ತಿದ್ದಂತೆ ಕಾರ್ಯಕ್ರಮಕ್ಕೆ ರಂಗೇರಿತು. ನಂತರ, ನಮ್ಮ ಹಿರಿಯರಿಂದ ಗಿಡ ನೆಡುವ ಕಾರ್ಯಕ್ರಮ ನೆರವೇರಿತು ನಂತರ ಅವರನ್ನು ಸನ್ಮಾನಿಸಲಾಯಿತು . ಗಿಡ ನೆಡುವ ಕಾರ್ಯಕ್ರಮ ಮತ್ತು ಗಿಡಗಳನ್ನು ತರುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತವರು ನಮ್ಮ ಬಳಗದ “ಸುರೇಶ್ ಹೆಬ್ಳಿಕರ್” ಎಂದು ಗುರುತಿಸಲ್ಪಡುವ ಮಹಾಂತೇಶ ವಿರಾಪೂರವರು.

 

ನಮ್ಮ ಪುಟಾಣಿ ಮಿತ್ರರು ಈಜುಗೊಳದಲ್ಲಿ ಈಜಾಡಿ ಮತ್ತು ಮಳೆ ಕುಣಿತದಲ್ಲಿ ಕುಣಿದು ಆನಂದಿಸಿದರು.

 

ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪ್ರಭು ಸವಣೂರ್ ರವರು ನಿರ್ವಹಿಸಿದರು. ಊಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಟಪ ರಂಗೇರಿತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು ಶ್ರೀಮತಿ ಜ್ಯೋತಿ ವೀರಾಪುರ ಅವರು. ಕಾರ್ಯಕ್ರಮ ಕೃಷ್ಣ ಸತ್ತೀಕರ್ ಅವರ ಶರಣು ಶರಣಯ್ಯ ಎಂಬ ಗಣಪತಿಯ ಹಾಡಿನಿಂದ ಮತ್ತು ಜ್ಯೋತಿ ಬೆಳಗುವುದರಿಂದ ಶುರುವಾಯಿತು. ಟ್ರಸ್ಟಿನ ಅಧ್ಯಕ್ಷರಾದ ವಾಲಿಯವರು ಸ್ವಾಗತ ಭಾಷಣವನ್ನು ಮಾಡಿದರು. ರಾಜಗೋಳಿಯವರು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಮತ್ತು ಸುಬ್ರಹ್ಮಣ್ಯಂ ಅವರನ್ನು ಸಭೆಗೆ ಪರಿಚಯಿಸಿದರು. UKSL ಟ್ರಸ್ಟೀಗಳಿಂದ ಅತಿಥಿಗಳಿಗೆ ಮಾಲಾರ್ಪಣೆ ಮಾಡಲಾಯಿತು. ಅರುಣ್ ಯಾದವಾಡ್ ಅವರು UKSL ನಡೆದು ಬಂದ ದಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಅತಿಥಿಯವರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪರಿಸರ ಮೇಲಿನ ಪರಿಣಾಮಗಳ ಬಗ್ಗೆ ಮಾತನಾಡಿದರು.

 

ಕಾರ್ಯಕ್ರಮ ರಂಗೇರುತ್ತಿದ್ದಂತೆ ಸಾನ್ವಿ ಹಾಗೂ ಸಮಿತ್ ಪೆಟ್ಲೂರು ಅವರಿಂದ ಸೊಗಸಾದ ಭರತನಾಟ್ಯ ಮಾಡಲಾಯಿತು. ನಂತರ ಧೇಯಾ ಪಾಟೀಲ್ ಅವರಿಂದ “ಬೊಂಬೆ ಹೇಳುತೈತೆ” ಹಾಡು ತೇಲಿ ಬಂತು . ಅನನ್ಯ ಬಳೂರಗಿ ಯವರಿಂದ Semi Classical dance, ನಿಹಾಲ್ ಕೊಡಂಚ ಅವರಿಂದ ಕೊಳಲುವಾದನ ಪ್ರಸ್ತುತಪಡಿಸಲಾಯಿತು. ಸಚಿತ್ ವೀರಾಪುರ್ ಮತ್ತು ರಿಷಬ್ ಸುಕಾಲಿ ಜಂಟಿಯಾಗಿ ಒಗಟುಗಳ ಕಾರ್ಯಕ್ರಮ ನಡೆಸಿಕೊಟ್ಟರು, ಎಲ್ಲರೂ ಬಲು ಉತ್ಸಾಹದಿಂದ ಒಗಟುಗಳನ್ನು ಬಿಡಿಸಲು ಪ್ರಯತ್ನಿಸಿದರು. ಬಳಗದವರ ಒತ್ತಾಯದ ಮೇರೆಗೆ ಜರ್ಮನಿಯಿಂದ ಬಂದಿದ್ದಂತಹ ಪ್ರವೀಣ ಕವಡಿ ಅವರು ದರಾ ಬೇಂದ್ರೆಯವರ “ನೀ ಹಿಂಗ ನೋಡಬ್ಯಾಡ ನನ್ನ” ಹಾಡನ್ನು ಮನಮುಟ್ಟುವಂತೆ ಹಾಡಿದರು. ಅವರಂತೆ ಅಮೇರಿಕದಿಂದ ಬಂದಿದ್ದ ಶ್ರೀನಿವಾಸ್ ಗುಡಿಯವರು ಕೂಡ ತಮ್ಮ ಕಾಲೇಜಿನ ದಿನಗಳನ್ನು ಮೆಲೆಕು ಹಾಕುತ್ತಾ “ಬಿವ್ಹಿಬಿ ಗೆ ಹಚ್ಚಿದ ಮ್ಯಾಲೆ ಏನೇನ್ ಕಂಡಿ” ಎಂಬ ಹಾಡನ್ನು ಹಾಡಿ ಎಲ್ಲರನ್ನು ಕಾಲೇಜು ದಿನಗಳತ್ತ ಕರೆದೊಯ್ದರು. ಎಲ್ಲರೂ ನಿರೀಕ್ಷಿಸುತ್ತಿದ್ದ Standup Comedian ಶ್ರೀ ರಾಘವೇಂದ್ರ ಆಚಾರ್ಯರವರ ನಗೆ ಚಟಾಕಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ತದನಂತರ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲು, ವನಿತಾ ಲೋಕ ತಂಡದಿಂದ ದೇಶಭಕ್ತಿ ಆಧಾರಿತ ನೃತ್ಯ ಎಲ್ಲರ ಚಪ್ಪಾಳೆ ಗಿಟ್ಟಿಸಿತು. ಸುರೇಶ್ ತಿಗಡಿ ಮತ್ತು ಕೃಷ್ಣ ಸತ್ತೀಕರ್ ಅವರಿಂದ “ನಾ ಹಾಡಲು ನೀವು ಹಾಡಬೇಕು” ಎಂಬ ಹಾಡು ಪ್ರಸ್ತುತವಾಯಿತು.  ಧೇಯಾ ಪಾಟೀಲ್ ಮತ್ತು ದಕ್ಷಾ ವಾಲಿ ಇಬ್ಬರು ಸೇರಿ Medley Mashup ಗೆ ನೃತ್ಯ ಮಾಡಿದರು. ಸ್ಮಿತಾ ಗೋನಾಳ್ ಅವರು ಕಥಕ್ ನೃತ್ಯ ಪ್ರಸ್ತುತಪಡಿಸಿ ನೆರೆದಂತಹ ಬಳಗವನ್ನು ರಂಜಿಸಿದರು.

 

ವನಿತಾ ಲೋಕ ತಂಡದವರು “ನಿಂಬಿಯ ಬನದ ಮ್ಯಾಗ” ಎಂಬ ಜನಪದ ಗೀತೆಯನ್ನು ಇಂಪಾಗಿ ಹಾಡಿದರು. ಪದ್ಮಜಾ ಕೊಟ್ಟೂರ್ ರವರು ತಮ್ಮ ಕಾಲೇಜ್ ದಿನಗಳಲ್ಲಿ ಹಾಡಿ ಫೇಮಸ್ ಆಗಿದ್ದ ದ ರಾ ಬೇಂದ್ರೆ ಅವರು ಬರೆದ “ಟೊಂಕದ ಮ್ಯಾಲೆ ಕೈ ಇಟ್ಟುಕೊಂಡು” ಎಂಬ ಹಾಡಿಗೆ ಎಲ್ಲರೂ ಶೀಟಿ ಹೊಡೆದರು. ನಾವು ಯಾರಿಗೇನೂ ಕಮ್ಮಿ ಇಲ್ಲ ಅಂತ ಕೊನೆಯದಾಗಿ ನಮ್ಮ ಯುಕೆಎಸ್ಎಲ್ ಬಳಗದ ಬಹದ್ದೂರ್ ಗಂಡುಗಳು “ಕೋಲುಮಂಡೆ” ಹಾಡಿಗೆ ಹೆಜ್ಜೆ ಹಾಕಿ ಉಳಿದವರನ್ನು ಹೆಜ್ಜೆ ಹಾಕುವಂತೆ ಮಾಡಿದರು.

ಈ ಎಲ್ಲ ಒಳಾಂಗಣದ ಕಾರ್ಯಕ್ರಮದ ಜವಾಬ್ದಾರಿಯನ್ನು ತೆಗೆದುಕೊಂಡವರು ಗಿರೀಶ್ ಮೆಟಗುಡ್ಡಮಠರವರು.

ಭರತ್ ಬೊಮ್ಮನಗೌಡರ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 

ಕೊನೆಯದಾಗಿ ಎಲ್ಲರೂ ಸಾಮೂಹಿಕ photo ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಾರ್ಷಿಕ ಸ್ನೇಹ ಸಮ್ಮೇಳನದ ಸವಿ ನೆನಪುಗಳೊಡನೆ ಮತ್ತು ಮುಂದಿನ ಇಂತಹ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳೆಡೆಗೆ ತೆರಳಿದರು.

 

ಭರತ್ ಬೊಮ್ಮನಗೌಡರ್

Leave a Reply

Your email address will not be published. Required fields are marked *

Message *
Name*
Email *