UKSL ಪ್ರತಿಭಾ ಪುರಸ್ಕಾರ 2023

UKSL ಪ್ರತಿಭಾ ಪುರಸ್ಕಾರ 2023

ಕಾರ್ಯಕ್ರಮದ ವರದಿ:

ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ 91, ಸ್ಪ್ರಿಂಗ್ ಬೋರ್ಡ್ ಸಭಾಂಗಣದಲ್ಲಿ ಸೆಪ್ಟೆಂಬರ್ 3 ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಇಸ್ರೋ ಹಿರಿಯ ವಿಜ್ಞಾನಿ ಶ್ರೀ ಹನುಮಂತರಾಯ ಬಳೂರಗಿ ಅವರು ಆಗಮಿಸಿದ್ದರು. ಇವರು ಭಾರತದ ಹೆಮ್ಮೆಯ ಚಂದ್ರಯಾನ 3 ಮತ್ತು ಆದಿತ್ಯ L1 ಯಶಸ್ವಿ ಉಡಾವಣೆಯ ತಂಡದ ಸದಸ್ಯರು ಮತ್ತು UKSL ಟ್ರಸ್ಟಿನ ಸದಸ್ಯರು. ಮಕ್ಕಳು ಕಷ್ಟ ಪಟ್ಟು ಓದಿ ಸಮಾಜದಲ್ಲಿ ಒಳ್ಳೆಯ ನಾಗರೀಕರಾಗಬೇಕು ಎಂದು ಕರೆ ನೀಡಿದರು. ಇಸ್ರೋ ಸ್ಥಾಪನೆಯಾದಾಗಿನಿಂದ ಚಂದ್ರಯಾನ ಮತ್ತು ಆದಿತ್ಯ ಉಡಾವಣೆವರೆಗೆ ನಡೆದು ಬಂದ ಏಳು ಬೀಳಿನ ಹಾದಿಗಳನ್ನು ವಿವರಿಸಿದರು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಟ್ರಸ್ಟಿನ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ‘ಪ್ರಾಂತೀಯ ಕೂಟ ವಿಶ್ವದತ್ತ ನೋಟ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಟ್ರಸ್ಟಿಗೆ ಶುಭ ಹಾರೈಸಿದರು.

ಕುಮಾರಿ ಧ್ಯೇಯ ಪಾಟೀಲ ಅವರು ಪ್ರಾರ್ಥನೆ ನೆರವೇರಿಸಿದರು. ಟ್ರಸ್ಟಿನ ಅಧ್ಯಕ್ಷ ಶ್ರೀ ಗಂಗಾಧರ್ ವಾಲಿ ಎಲ್ಲರನ್ನು ಸ್ವಾಗತಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಟ್ರಸ್ಟಿನ ಖಜಾಂಚಿ ಶ್ರೀ ಪ್ರಕಾಶ ರಾಜಗೋಳಿ ಅವರು ಟ್ರಸ್ಟು ನಡೆದು ಬಂದ ದಾರಿ, ಇದುವರೆಗೆ ನೆರೆ ಹಾವಳಿ ಪೀಡಿತರು, ಕೋವಿಡ್ ಪೀಡಿತರು, ವೃದ್ಧಾಶ್ರಮ, ಅಂಧರ ಶಾಲೆ ಮುಂತಾದವರಿಗೆ ಸುಮಾರು 35 ಲಕ್ಷದವರೆಗೆ ಅಗತ್ಯ ವಸ್ತು ವಿತರಿಸಿದ ಬಗ್ಗೆ ವಿವರಿಸಿದರು. ಟ್ರಸ್ಟಿನ ಸದಸ್ಯರೇ ಸ್ವತಃ ಎಲ್ಲ ಕಾರ್ಯಗಳಲ್ಲಿ ಕೈಜೋಡಿಸಿ ದಾನಿಗಳು ನೀಡಿದ ಹಣ ಸತ್ಪಾತ್ರರಿಗೆ ತಲುಪಿಸುತ್ತಾರೆ ಎಂದು ತಿಳಿಸಿದರು. ತನು ಮನ ಧನದಿಂದ ಸಹಾಯ ಸಹಕಾರ ನೀಡುತ್ತಿರುವ ಸದಸ್ಯರ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದರು.

ಟ್ರಸ್ಟಿನ ಹಿರಿಯ ಸದಸ್ಯರಾದ ಶ್ರೀ ಸೋಮನಾಥ ಆಲೂರ್ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಾಲಿನ ಪಿ ಯು ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಕುಮಾರ ರಾಹುಲ ರಾಠೋಡ ಮತ್ತು 3 ನೇ ಸ್ಥಾನ ಪಡೆದ ಕುಮಾರಿ ಕರಿಬಸಮ್ಮ ದಡ್ಡಿ ಇವರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. ಬಡ ಮತ್ತು ಪ್ರತಿಭಾವಂತರಿಗೆ ಟ್ರಸ್ಟಿನ ವತಿಯಿಂದ ತಲಾ 5 ಸಾವಿರ ರೂಪಾಯಿಗಳ ಹಣಕಾಸಿನ ನೆರವು ನೀಡಲಾಯಿತು.

ಇತ್ತೀಚಿಗೆ ಜರ್ಮನಿ ದೇಶದ ಕೊಲೊನ್ ನಗರದಲ್ಲಿ ಜರುಗಿದ 8 ನೇ ವಿಶ್ವ ಕುಬ್ಜರ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ವಿಜೇತರಾದ ಶ್ರೀ ದೇವಪ್ಪ ಮೋರೆ ಮತ್ತು ಕುಮಾರಿ ಮಂಜುಳಾ ಗೊರಗುದ್ದಿ ಅವರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರಿಗೂ ಸಹಾ ತಲಾ 5 ಸಾವಿರ ರೂಪಾಯಿಗಳ ಧನಸಹಾಯವನ್ನು ಟ್ರಸ್ಟಿನ ವತಿಯಿಂದ ನೀಡಲಾಯಿತು. ಡೇರಿಂಗ್ ಎಸ್ ಎ ಪಿ ಚಾಂಪ್ ಗುಂಪಿನಿಂದ ಸಂಗ್ರಹಿಸಿದ ಹಣವನ್ನು ಪ್ರತಿನಿಧಿ ಶ್ರೀ ಬಾಹುಬಲಿ ಪಾಟೀಲ ಅವರ ಮೂಲಕ ಇದೆ ಸಂದರ್ಭದಲ್ಲಿ ನೀಡಲಾಯಿತು.

JEE ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಕುಮಾರ್ ಸುಜಿತ್ ಅಡಿಗ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಸನ್ಮಾನಿತರು ತಮ್ಮ ಸಾಧನೆಯ ಮೆಟ್ಟಿಲುಗಳ ವಿವರಣೆ ನೀಡಿದರಲ್ಲದೆ ಗುರು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದಗಳ ಬಗ್ಗೆ ತಿಳಿಸಿ ತಮ್ಮನ್ನು ಸನ್ಮಾನಿಸಿದ್ದಕ್ಕೆ ಟ್ರಸ್ಟಿಗೆ ಗೌರವ ವಂದನೆ ತಿಳಿಸಿದರು.
2022-23 ಸಾಲಿನ 10ನೇ ಮತ್ತು 12ನೇ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳಿಗೆ ಸ್ಮರಣಿಕೆ ಮತ್ತು ಸರ್ಟಿಫಿಕೇಟುಗಳನ್ನು ಮುಖ್ಯ ಅತಿಥಿಗಳು ನೀಡಿದರು.
ಸಭೆಯಲ್ಲಿ ಭಾಗವಸಿದ ಎಲ್ಲರಿಗೂ ಖ್ಯಾತ ಮಾನಸಿಕ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರು ಬರೆದ ನಿಮ್ಮ “ಬುದ್ಧಿವಂತಿಕೆ, ನೆನಪಿನ ಶಕ್ತಿ ಹೆಚ್ಚಲಿ improve memory-intelligence” ಎನ್ನುವ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.

ಶ್ರೀಮತಿ ಸ್ವಾತಿ ಶಾಮಭಟ್ಟನವರ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಶ್ರೀಮತಿ ಜ್ಯೋತಿಲಕ್ಶ್ಮಿ ವೀರಾಪುರ ಕಾರ್ಯಕ್ರಮ ನಡೆಸಿಕೊಟ್ಟರು.
ಟ್ರಸ್ಟಿಗಳಾದ ಶ್ರೀ ಗಂಗಾಧರ ವಾಲಿ, ಶ್ರೀ ಅರುಣ ಯಾದವಾಡ, ಶ್ರೀಮತಿ ವೀಣಾ, ಶ್ರೀ ಪ್ರಭು ಸವಣೂರು, ಶ್ರೀ ದೀಪಕ ಆಲೂರ, ಶ್ರೀ ಗಿರೀಶ ಮೆಟಗುಡ್ಡಮಠ ಮತ್ತು ಶ್ರೀಮತಿ ಸುಜಾತ ಮುಂಗರವಾಡಿ ಅವರು ಉಪಸ್ಥಿತರಿದ್ದರು.
ವನಿತಾಲೋಕದ ಸದಸ್ಯರಾದ ಶ್ರೀಮತಿ ವೀಣಾ ಕಾರ್ತಿಕ್ ಅವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 

Leave a Reply

Your email address will not be published. Required fields are marked *

Message *
Name*
Email *